ಚೀನ ಸಮುದ್ರ

ಚೀನದ ತೀರದಿಂದಾಚೆಗೆ ಜಪಾನಿನಿಂದ ಮಲಯ ಪರ್ಯಾಯದ್ವೀಪದ ದಕ್ಷಿಣ ತುದಿಯವರೆಗೆ ಹಬ್ಬಿರುವ ಪೆಸಿಫಿಕ್ ಸಾಗರದ ಒಂದು ಭಾಗವಾಗಿರುವ ಸಮುದ್ರ. ಟೈಟಾನ್ ದ್ವೀಪದಿಂದಾಗಿ ಈ ಕಡಲು ಪೂರ್ವ ಚೀನ ಸಮುದ್ರ ಮತ್ತು ದಕ್ಷಿಣ ಚೀನ ಸಮುದ್ರ ಎಂದು ಎರಡು ಭಾಗಗಳಾಗಿ ಒಡೆದಿದೆ. ವಿಸ್ತೀರ್ಣ 4,82,300 ಚ.ಮೈ.

	ಪೂರ್ವ ಚೀನ ಸಮುದ್ರ : ಡುಂಗ್‍ಹೈ ಎಂಬುದು ಇದರ ಚೀನೀ ಹೆಸರು. ಇದರ ಪಶ್ಚಿಮಕ್ಕೆ ಚೀನ ಭೂಪ್ರದೇಶ, ದಕ್ಷಿಣಕ್ಕೆ ಟೈವಾನ್, ಆಗ್ನೇಯಕ್ಕೆ ರೀಯೂಕ್ಯೂ ದ್ವೀಪಗಳು ; ಈ ಶಾನ್ಯಕ್ಕೆ ಕೀಯೂಷೂ ದ್ವೀಪ ಮತ್ತು ಕೊರಿಯ ಇವೆ. ಇದರ ವಿಸ್ತೀರ್ಣ 4,82,300 ಚ.ಮೈ. ಹಳದಿ ಸಮುದ್ರ ಇದರ ಒಂದು ಭಾಗ. ಪೂರ್ವ ಚೀನ ಸಮುದ್ರಕ್ಕೆ ಕೊರಿಯ ಜಲಸಂಧಿಯ ಮೂಲಕ ಜಪಾನ್ ಸಮುದ್ರದೊಂದಿಗೂ ಫಾರ್ಮೋಸ ಜಲಸಂಧಿಯ ಮೂಲಕ ಜಪಾನ್ ಸಮುದ್ರದೊಂದಿಗೂ ರೀಯೂಕ್ಯೂ ದ್ವೀಪಗಳ ನಡುವಣ ಹಲವು ಜಲಸಂಧಿಗಳ ಮೂಲಕ ಫಿಲಿಪೀನ್ ಸಮುದ್ರದೊಂದಿಗೂ ಪೆಸಿಫಿಕ್ ಸಾಗರದ ಒಂದು ಭಾಗದೊಂದಿಗೂ ಸಂಪರ್ಕ ಏರ್ಪಟ್ಟಿವೆ.

	ಪೂರ್ವಚೀನ ಸಮುದ್ರದ ಬಹುಭಾಗ ಖಂಡೀಯ ದಿಣ್ಣೆಯಿಂದ (ಕಾಂಟಿನೆಂಟಲ್ ಷೆಲ್ಟ್) ಕೂಡಿದ್ದು. ಅಲ್ಲಿ ಸಮುದ್ರ ಆಳ ಪಶ್ಚಿಮದಿಂದ ಪೂರ್ವದ ಕಡೆಗೆ ಹೋದಂತೆ 100' ಯಿಂದ 600'ವರೆಗೆ ವ್ಯತ್ಯಾಸವಾಗುತ್ತದೆ. ರೀಯೂಕ್ಯೂ ದ್ವೀಪಗಳ ಬಳಿಯಲ್ಲಿ 9,126' ಆಳದ ಕಮರಿಯೊಂದು ಇದೆ. ಬೇಸಿಗೆಯಲ್ಲಿ ಮಳೇ, ಚಳಿಗಾಲ ಶುಷ್ಕ. ಬೇಸಿಗೆಯಲ್ಲಿ ಚಂಡಮಾರುತಗಳು ಬೀಸುವುದುಂಟು. ವರ್ಷಕ್ಕೆ ಮೂರು ನಾಲ್ಕು ಸಾರಿ ಇವುಗಳ ಆಗಮನ. ಜನವರಿಯಲ್ಲಿ ಉಷ್ಣತೆ ವಾಯುವ್ಯದಲ್ಲಿ 40 ಫ್ಯಾ.ನಿಂದ ಆಗ್ನೇಯದಲ್ಲಿ 60 ಫ್ಯಾ.ವರೆಗೆ ವ್ಯತ್ಯಾಸವಾಗುತ್ತದೆ. ಜುಲೈ ಸರಾಸರಿ ಉಷ್ಣತೆ 80 ಫ್ಯಾ. ವಾರ್ಷಿಕ ಅವಪತನ ಪಶ್ಚಿಮದಲ್ಲಿ 45", ಪೂರ್ವದಲ್ಲಿ 90". ಮಧ್ಯ ಪೆಸಿಫಿಕ್ ಸಾಗರದ ಉತ್ತರ ಸಮಭಾಜಕೀಯ ಉಷ್ಣೋದಕ ಪ್ರವಾಹದ ಉತ್ತರದ ಕವಲು ಈ ಕಡಲಿನ ಪೂರ್ವಭಾಗದ ಮೇಲೆ ಪ್ರಭಾವ ಬೀರುತ್ತದೆ. ಈ ಸಮುದ್ರದ ನೀರಿನ ಲವಣತೆ ಸಾವಿರಕ್ಕೆ 34.5. ಆದರೆ ಯಾಂಗ್‍ಟ್ಸೀ ನದಿಯ ಮುಖಜಭೂಮಿಯ ಬಳಿಯಲ್ಲಿ 10/00-5/00ಕ್ಕೆ ಇಳಿಯುತ್ತದೆ. ಈ ಸಮುದ್ರಕ್ಕೆ ಸೇರುವ ನದಿಗಳಲ್ಲಿ ಯಾಂಗ್ ಟ್ಸೀ ಮುಖ್ಯ ನದಿ. ಚೀನ, ಟೈವಾನ್, ಜಪಾನ್, ಕೊರಿಯಗಳಲ್ಲಿ ಮೀನುಗಾರಿಕೆ ಒಂದು ಮುಖ್ಯ ಉದ್ಯೋಗ. ಇಲ್ಲಿ ಸಿಗುವ ಮೀನುಗಳಲ್ಲಿ ಸಾರ್ಡೀನ್, ಹಾಲುಮೀನು, ಟ್ಯೂನಾ, ಕಡಲ ಬ್ರೀಮ್, ಕ್ರೋಕರ್, ಚಿಪ್ಪುಮೀನು ಮುಖ್ಯವಾದವು. ಈ ಸಮುದ್ರದ ಮೇಲಿರುವ ಮುಖ್ಯ ಬಂದರುಗಳು ಪೂಚೌ, ವೆಂಚೌ, ನಿಂಗ್‍ಪಿ, ಷಾಂಗ್‍ಹೈ, ಸಿನ್‍ಹೇಲಿನ್, ಟ್ಸಿಂಗ್‍ಟೋ, ಟನ್‍ಟ್ಸಿನ್, ಚಿನ್-ಹ್ಯಾಂಗ್-ಟೋ, ಡೇರೆನ್, ಚಿನ್ನಾಂಪೊ, ಚೆಮುಉಲ್ಪೊ, ನಾಗಸಾಕೀ ಮತ್ತು ಚಿ-ಲುಂಗ್.

	ದಕ್ಷಿಣ ಚೀನ ಸಮುದ್ರ : ನಾನ್ ಹೈ ಎಂಬುದು ಇದರ ಚೀನೀ ಹೆಸರು. ವಿಸ್ತೀರ್ಣ 8,95,400 ಚ.ಮೈ. ಈ ಸಮುದ್ರದ ಪಶ್ಚಿಮಕ್ಕೆ ಆಗ್ನೆಯ ಏಷ್ಯ ಭೂಪ್ರದೇಶ, ದಕ್ಷಿಣಕ್ಕೆ ಬೋರ್ನಿಯೊ, ಪೂರ್ವಕ್ಕೆ ಫಿಲಿಪೀನ್ಸನ ಪಲಾವನ್, ಮಿಂಡೋರೋ ಮತ್ತು ಲೂeóÁನ್, ಈಶಾನ್ಯಕ್ಕೆ ಟೈವಾನ್, ಉತ್ತರಕ್ಕೆ ಚೀನೀ ಭೂಪ್ರದೇಶ ಇವೆ. ದಕ್ಷಿಣ ಚೀನದ ಷೀ ಚೀಯಾಂಗ್, ಉತ್ತರ ವಿಯಟ್ನಾಮಿನ ಕೆಂಪು ನದಿ, ಲಾಹೋಸ್, ಕಾಂಬೋಡಿಯ ಮತ್ತು ದಕ್ಷಿಣ ವಿಯಟ್ನಾಮಿನ ಮೇಕಾಂಗ್ ಮತ್ತು ಥೈಲೆಂಡಿನ ಮೆನಾಮ್ ಚಾವೊ ಫ್ಯಾ ಈ ಸಮುದ್ರವನ್ನು ಸೇರುವ ಪ್ರಮುಖ ನದಿಗಳು. ಸಮುದ್ರದ ಮುಖ್ಯ ಭೂತೀರ ಹೆಚ್ಚು ಅಂಕುಡೊಂಕಾಗಿಲ್ಲ. ಟಾನ್‍ಕಿನ್ ಮತ್ತು ಸೈಯಾಮ್ ಕೊಲ್ಲಿಗಳು ಮಾತ್ರ ಮುಖ್ಯ. ಸಮುದ್ರದ ಪಶ್ಚಿಮ ಮತ್ತು ದಕ್ಷಿಣ ಭಾಗಗಳಲ್ಲಿ ಈ ಸಮುದ್ರದ ಬಹುಭಾಗದ ತಳ 500' ಗಿಂತ ಹೆಚ್ಚಿಲ್ಲ. ಇದು ಖಂಡೀಯ ದಿಣ್ಣೆಯಿಂದ ಕೂಡಿದ್ದು, ಈಶಾನ್ಯಭಾಗದಲ್ಲಿ ಸಮುದ್ರದ ಆಳ 15,000'ಗಿಂತ ಹೆಚ್ಚು. ಪೂರ್ವ ಚೀನ ಸಮುದ್ರದಲ್ಲಿ ದ್ವೀಪಗಳಿಲ್ಲ. ಆದರೆ ಈ ಸಮುದ್ರದಲ್ಲಿ ಅನೇಕ ದ್ವೀಪಗಳೂ ದಿಬ್ಬಗಳೂ ಇವೆ.

	ದಕ್ಷಿಣ ಚೀನ ಸಮುದ್ರ ತಳ ಅನೇಕ ಭೂಕಂಪಗಳು ಮತ್ತು ಜ್ವಾಲಾಮುಖಿಗಳ ಸ್ಪೋಟಗಳಿಂದಾಗಿ ಅನೇಕ ಬದಲಾವಣೆಗಳಿಗೆ ಒಳಗಾಗುತ್ತದೆ. ಪೂರ್ವ ಚೀನ ಸಮುದ್ರದಂತೆ ಇದೂ ಮಾನ್ಸೂನ್ ಪ್ರಭಾವಿತ. ಆದರೆ ಇದು ಸಮಭಾಜಕ ವೃತ್ತಕ್ಕೆ ಹತ್ತಿರದಲ್ಲಿರುವುದರಿಂದ ಚಳಿಗಾಲದ ಉಷ್ಣತೆ ಪೂರ್ವ ಚೀನ ಸಮುದ್ರದಲ್ಲಿಯದಕ್ಕಿಂತ ಅಧಿಕ (60 ಫ್ಯಾ.-80 ಫ್ಯಾ). ವಾರ್ಷಿಕ ಅವಪತನ 100". ಇಲ್ಲಿ ಚಂಡಮಾರುತಗಳು ಹೆಚ್ಚು (ವರ್ಷದ ಸರಾಸರಿ 15). ಟ್ಯೂನ, ಚಾನ್-ಚಿಯಾಂಗ್, ಹೈಫಾಂಗ್, ಬ್ಯಾಂಗ್‍ಕಾಕ್ ಇವು ಮುಖ್ಯ ಬಂದರುಗಳು. ಯೂರೋಪಿನಿಂದ ಸಿಂಗಪುರದ ಮುಖಾಂತರ ದೂರ ಪ್ರಾಚ್ಯಕ್ಕೆ ಹೋಗುವ ಹಡಗುಗಳು ದಕ್ಷಿಣ ಚೀನ ಸಮುದ್ರದ ಮೂಲಕ ಯಾನಮಾಡುತ್ತವೆ.			     (ಎಂ.ಎ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ